ಶನಿವಾರ, ಜನವರಿ 1, 2011

ತೇಜಸ್ವಿ ನೆನಪಿನ ಚಿತ್ರಗಳು- ಎಲ್.ಸಿ. ಸುಮಿತ್ರಾ ಬರಹ

ತೇಜಸ್ವಿ ನೆನಪಿನ ಚಿತ್ರಗಳು- ಎಲ್.ಸಿ. ಸುಮಿತ್ರಾ ಬರಹ
ಡಾ.ಎಲ್ .ಸಿ ಸುಮಿತ್ರಾ
ಸೋಮವಾರ, 5 ಏಪ್ರಿಲ್ 2010 (09:54 IST)
ತೇಜಸ್ವಿ

ಸರಳ, ನೇರ, ಸ್ಪಷ್ಟವಾಗಿ ಬರೆಯುತ್ತ, ಬೆರೆಗುಗೊಳಿಸುತ್ತ ಬದುಕಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ತೀರಿಹೋಗಿ ಇಂದಿಗೆ ಮೂರು ವರ್ಷಗಳಾಯಿತು. ಅವರನ್ನು ಹತ್ತಿರದಿಂದ ಬಲ್ಲ ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಅವರು ತಮ್ಮ ನೆನಪುಗಳನ್ನಿಲ್ಲಿ ಮೆಲುಕು ಹಾಕಿದ್ದಾರೆ...

ನಮ್ಮನ್ನೆಲ್ಲ ಇದ್ದಲ್ಲೇ ಬಿಟ್ಟು ತಾವು ಮುಂದೆ ಹೋಗಿ ದಾರಿಯ ತುದಿಯ ತಿರುವಿನಲ್ಲಿ ಮರೆಯಾದರು. ತೇಜಸ್ವಿ ಎದುರಿಗಿಲ್ಲ, ಅವರು ಬಿಟ್ಟು ಹೋದ ನೆನಪುಗಳಿವೆ, ಚಿತ್ರಗಳಿವೆ, ಕೊಟ್ಟು ಹೋದ ತಿಳುವಳಿಕೆಯಿದೆ...

ನನ್ನ ಶಾಲಾ ದಿನಗಳಲ್ಲಿ ತೇಜಸ್ವಿಯವರ 'ಸ್ವರೂಪ' ಓದಿದ್ದು. ಅದನ್ನು ತಮ್ಮ ಸಹ್ಯಾದ್ರಿ ಪ್ರಕಾಶನದ ಇತರ ಕೆಲವು ಪುಸ್ತಕಗಳ ಜೊತೆ ಕಡಿದಾಳು ಶಾಮಣ್ಣ ನಮ್ಮ ತಂದೆಗೆ ಕೊಟ್ಟಿದ್ದರು. ಕರ್ವಾಲೋ ಕಾದಂಬರಿ ಓದಿದ ಮೇಲೆ ತೇಜಸ್ವಿಯವರ ಕುರಿತು ಕುತೂಹಲ ಜಾಸ್ತಿಯಾಗಿತ್ತು. ತೇಜಸ್ವಿಯವರನ್ನು ಪ್ರತ್ಯಕ್ಷವಾಗಿ ನೋಡುವ ಮೊದಲೇ ಅವರನ್ನು ಕುರಿತು ಒಬ್ಬ ವಿಶಿಷ್ಟ ವ್ಯಕ್ತಿ ಎಂಬ ಕಲ್ಪನೆಯಿತ್ತು.

ಮಾನಸ ಗಂಗೋತ್ರಿಯಲ್ಲಿ ಎಂಎ ಓದಲು ಹಾಸ್ಟೆಲ್ ನಲ್ಲಿದ್ದಾಗ 'ಶಾಲಿಮಾರ್' ಥಿಯೇಟರ್ ನಲ್ಲಿ 'ರೋಮನ್ ಹಾಲಿಡೇ' ಎಂಬ ಗ್ರೆಗರಿಪೆಕ್ ಮತ್ತು ಆಡ್ರೆ ಹೆಬ್ಬರ್ನ್ ನಟಿಸಿದ ಹಳೆಯ ಸಿನೆಮಾ ಬಂದಿತ್ತು. ಸಹಪಾಠಿ ಅನಲಾ (ತೇಜಸ್ವಿ ಅವರ ಸೋದರ ಸಂಬಂಧಿ) 'ತೇಜಸ್ವಣ್ಣ ಈ ಸಿನೆಮಾನ 7-8 ಸಲ ನೋಡಿದಾರಂತೆ, ಚೆನ್ನಾಗಿದೆಯಂತೆ' ಅಂದಳು. ನಾವೂ ಹೋಗಿ ನೋಡಿದೆವು. ಸಿನೆಮ ತುಂಬಾ ಚೆನ್ನಾಗಿತ್ತು. ನಟಿ ಆಡ್ರೆ ಹೆಬ್ಬರ್ಸ್ ರಾಜಕುಮಾರಿಯಾಗಿಯೂ ಮತ್ತು ಗ್ರೆಗರಿಪೆಕ್ ಪತ್ರಕರ್ತನಾಗಿಯು ಅದ್ಭುತವಾಗಿ ನಟಿಸಿದ್ದರು. ಆಮೇಲೆ ನನಗನಿಸಿದ್ದು, ಶ್ರೀಮಂತಿಕೆಯ ಕೋಟೆಯಿಂದ ಹೊರಬಂದು ರಾಜಕುಮಾರಿಯೊಬ್ಬಳು ಪತ್ರಕರ್ತನನ್ನು ಪ್ರೀತಿಸುವ ಕಥೆ ಅದು. ಮೈಸೂರಿನ ಪ್ರತಿಷ್ಠೆಯನ್ನೆಲ್ಲ ಬಿಟ್ಟು- ರಾಜೇಶ್ವರಿಯವರ ಜೊತೆ ಮೂಡಿಗೆರೆಯ ಕಾಡಿನಲ್ಲಿ ನೆಲೆಸಿದ್ದ ತೇಜಸ್ವಿಯವರಿಗೆ ಸಹಜವಾಗಿಯೇ ಆ ಸಿನೆಮಾ ಇಷ್ಟವಾಗಿರಬೇಕು. ಅವರಿಗೆ ಪ್ರಿಯವಾದ ಸದಭಿರುಚಿಯ ತಿಳಿಹಾಸ್ಯದ ಶೈಲಿ ಬೇರೆ ಆ ಸಿನೆಮಾಕ್ಕೆ ಇತ್ತು.

ಕುವೆಂಪು ಅವರ ಮನೆಯಿಂದಲೇ ಬರುತ್ತಿದ್ದ ಸಹಪಾಠಿ ಅನಲ ತೇಜಸ್ವಿಯವರ ಕುರಿತು ಏನಾದರೂ ಹೇಳುತ್ತಿರುತ್ತಿದ್ದಳು. ತೇಜಸ್ವಿಯವರ ನಾಯಿ ಹೆಸರು ಕಿವಿ, ಅದಕ್ಕೆ ತೇಜಸ್ವಿ ಏಡಿ ಹಿಡಿಯುವುದನ್ನು ಕಲಿಸಿದ್ದಾರೆ. ಮೈಸೂರಿಗೆ ಬಂದಾಗ ಗಂಟೆಗಟ್ಟಲೆ ಕಾದು, ತೆಂಗಿನ ಮರದ ಮೇಲೆ ಕುಳಿತ ಗೂಬೆ ಫೋಟೋ ತೆಗೆದರು. ತೇಜಸ್ವಿ ಮಕ್ಕಳೆಲ್ಲರನ್ನೂ ಐಸ್ ಕ್ರೀಮ್ ತಿನ್ನಲು ಕರೆದೊಯ್ದಿದ್ದರು. ಹೀಗೆ ಅನಲಾ ಹೇಳುತ್ತಿದ್ದ ವಿವರಗಳು ಅವರ ಬಗ್ಗೆ ಕುತೂಹಲ ಮೂಡಿಸಿತ್ತು. ನಾನು ಎಂಎ ಓದುತ್ತಿದ್ದಾಗ CIIL(ಭಾರತೀಯ ಭಾಷಾಸಂಸ್ಥಾನ)ದಲ್ಲಿ ಅವರೊಮ್ಮೆ ಭಾಷಣ ಮಾಡಿದ್ದರು. ಅದೇ ವೇದಿಕೆಯಲ್ಲಿ ಚಂಪಾ ಕೂಡ ಮಾತನಾಡಿದ್ದರು. ಆ ನಂತರ ತೇಜಸ್ವಿಯವರನ್ನು ನೋಡಿದ್ದು 'ಕುವೆಂಪು ತೊಂಭತ್ತು' ಕಾರ್ಯಕ್ರಮದಲ್ಲಿ.

ಕುಪ್ಪಳಿಯ ಕಾರ್ಯಕ್ರಮಗಳಿಗೆ ಬರುತ್ತಿದ್ದ ತೇಜಸ್ವಿಯವರಿಗೆ ವೇದಿಕೆಯ ಮೇಲೆ ಮಾತನಾಡುವುದಕ್ಕಿಂತ ಅಲ್ಲೆಲ್ಲೋ ಮರದ ನೆರಳಲ್ಲಿ ಕುಳಿತು ಕೇಳಿಸಿಕೊಳ್ಳುತ್ತಿದ್ದುದೇ ಹೆಚ್ಚು ಇಷ್ಟವಾಗುತ್ತಿತ್ತು. ಅವರ ಪುಸ್ತಕಗಳಲ್ಲಿ ಅವರೇ ವ್ಯಕ್ತಪಡಿಸಿರುವಂತೆ ಮಲೆನಾಡಿನ ಸಣ್ಣ ಊರುಗಳ ಜೀವನ ಅವರಿಗೆ ಇಷ್ಟವಾಗಿತ್ತು. ಇದಕ್ಕೊಂದು ನಿದರ್ಶನ- ಅವರ ಗೆಳೆಯ ಶ್ರೀರಾಮ್ ಇಂಗ್ಲಿಷ್ ಅಧ್ಯಾಪಕರಾಗಿದ್ದವರು ನಿವೃತ್ತರಾದಾಗ ಪ್ರಾಸಂಗಿಕವಾಗಿ ನನ್ನ ಪತಿ ಶ್ರೀಕಂಠಮೂರ್ತಿಯವರಿಗೆ (ಮೂಲತಃ ಮೈಸೂರಿನವರು, ಇಂಗ್ಲಿಷ್ ಅಧ್ಯಾಪಕರು) ಮೈಸೂರಿಗೆ ವರ್ಗ ಮಾಡಿಸಿಕೊಳ್ತೀರೇನ್ರಿ ಅಂದರು. ತತ್ ಕ್ಷಣ ಪಕ್ಕದಲ್ಲಿದ್ದ ತೇಜಸ್ವಿ `ಅವರಿಗೇನ್ ತಲೆ ಕೆಟ್ಟಿದೆಯೇನ್ರಿ ತೀರ್ಥಹಳ್ಳಿ ಬಿಟ್ಟು ಮೈಸೂರಿಗೆ ಹೋಗಕ್ಕೆ' ಅಂದರು. ಈ ಸಂಭಾಷಣೆ ನಡೆದಿದ್ದು ನಮ್ಮ ಮನೆಯಲ್ಲೇ. ಸಣ್ಣ ಊರಿನ ಮೌನ ಮತ್ತು ಏಕಾಂತದ ಬದುಕನ್ನು ಇಷ್ಟಪಡುತ್ತಿದ್ದ ತೇಜಸ್ವಿ ಜತೆಗೆ, ಆಧುನಿಕ ತಂತ್ರಜ್ಞಾನದ ಕ್ಯಾಮರ, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡ ಮೊದಲ ಕನ್ನಡ ಲೇಖಕರಲ್ಲೊಬ್ಬರು.

1994ರಲ್ಲಿ ತೀರ್ಥಹಳ್ಳಿಯಲ್ಲಿ ಮಹಿಳಾ ವೇದಿಕೆಯಲ್ಲಿ ಮಾತನಾಡಿ ಎಂದು ಕರೆದಾಗ ಮೊದಲು ಇಲ್ಲ ಅಂದರು. ಅವರಿಗೆ ಸಾರ್ವಜನಿಕ ಭಾಷಣಗಲು ಇಷ್ಟವಾಗುತ್ತಿರಲಿಲ್ಲ. ಆಮೇಲೆ ನಮ್ಮ ಒತ್ತಾಯಕ್ಕೆ ಬಂದರು. ವೇದಿಕೆಯಲ್ಲಿ ರಾಜೇಶ್ವರಿ, ಪದ್ಮಾಶ್ರೀರಾಮ್ ಮತ್ತು ಶ್ರೀರಾಮ್ ಇದ್ದರು.

ಮಹಿಳಾ ಚಳುವಳಿ, ಸ್ತ್ರೀವಾದ ಇತ್ಯಾದಿ ಹೇಳುತ್ತಾ ತೇಜಸ್ವಿ ಗಂಡು-ಹೆಣ್ಣಿನ ವ್ಯಕ್ತಿತ್ವ, ಹೊಂದಾಣಿಕೆಗಳನ್ನು ಕುರಿತು ಕೊಟ್ಟ ಒಂದು ನಿದರ್ಶನ- `ರಸ್ತೆಯ ಮೇಲೆ ಇಬ್ಬರು ಅಪರಿಚಿತರು ಭೇಟಿಯಾಗಿ ಒಂದಷ್ಟು ದೂರ ಒಟ್ಟಿಗೇ ನಡೆದರೆ ಸ್ವಲ್ಪ ದೂರ ಹೋಗುವುದರಲ್ಲೇ ಅವರಲ್ಲಿ ಮಾತಿನ ಭಿನ್ನಾಭಿಪ್ರಾಯ ಬರಬಹುದು. ಇನ್ನು ಜೀವಮಾನ ಪೂರ್ತಿ ಒಟ್ಟಿಗೆ ಇರುವ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಬರದಿರಲು ಹೇಗೆ ಸಾಧ್ಯ? ಇಲ್ಲಿ ಆಕರ್ಷಣೆ ಇದ್ದೂ ಅಂತರವನ್ನು ಕಾಯ್ದುಕೊಳ್ಳಬೇಕು. ಹೇಗೆ 'Orbit'ನಲ್ಲಿ ಗ್ರಹಗಳು ಪರಸ್ಪರ ಆಕರ್ಷಣೆಯನ್ನು ಕಳೆದುಕೊಳ್ಳದೆ, ತಮ್ಮ ನಡುವೆ ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡು ಸುತ್ತುತ್ತಿರುತ್ತವೋ ಹಾಗೇ ಪರಸ್ಪರರ Space ಅನ್ನು ಕಾಯ್ದುಕೊಂಡು ಇರಬೇಕು. ಸ್ವಲ್ಪ ದೂರ ಜಾಸ್ತಿಯಾದರೆ ಗುರುತ್ವಾಕರ್ಷಣೆಯ ವಲಯದಿಂದ ಹೊರಹೋಗುವಂತಾಗುತ್ತಾರೆ. ಹತ್ತಿರ ಬಂದರೆ ಘರ್ಷಣೆಯಾಗಿ ವಿನಾಶ, ಹೀಗೆ ನಿರ್ದಿಷ್ಟ ಅಂತರದಲ್ಲಿ ಆಕರ್ಷಣೆ-ವಿಕರ್ಷಣೆ ಇರಬೇಕು' ಎಂದು ಹೇಳಿದ್ದರು.

ಶಿವರಾಮ ಕಾರಂತರು ತೇಜಸ್ವಿಯವರ ಮನೆಗೆ ಬಂದು ಎರಡು ದಿನ ತಂಗಿದ್ದರು. ತೋಟದಲ್ಲಿ ಚಟುವಟಿಕೆಯಿಂದ ಓಡಾಡಿಕೊಂಡು ತೇಜಸ್ವಿಯವರು ತೆಗೆದ ಹಕ್ಕಿ ಚಿತ್ರಗಳನ್ನು ನೋಡಿ, ಅವರ ಮನೆಯಲ್ಲೂ ಹೊರಗೂ 90 ದಾಟಿದ ಆ ಇಳಿವಯಸ್ಸಿನಲ್ಲೂ ಕಾರಂತರು ತೇಜಸ್ವಿಯವರು ಮಾಡಿದ ಎಲ್ಲಾ ಕೆಲಸಗಳನ್ನೂ ಮೆಚ್ಚಿಕೊಂಡು ಮತ್ತೊಮ್ಮೆ ವಿರಾಮವಾಗಿ ಬರುತ್ತೇನೆಂದು ಹೇಳಿ ಹೋದುದನ್ನು ನೆನಪಿಸಿಕೊಳ್ಳುತ್ತಾ 'ಎಂಥ ಚಟುವಟಿಕೆಯ ಜೀವ, ನಾವು ಆ ವಯಸ್ಸಿಗೆ ಸತ್ತು ಗೊಬ್ಬರ ಆಗಿರ್ತೀವಿ' ಎಂದಿದ್ದರು. (ಅವರು ಬಳಸಿದ ಪದಗಳೇ ಇವು.)

ಕುಪ್ಪಳಿ ಮನೆ ನವೀಕರಣ ಆಗುವ ಮೊದಲು 'ಕುವೆಂಪು 90' ಕಾರ್ಯಕ್ರಮ ನಡೆದಾಗ ತೇಜಸ್ವಿ ಎರಡು ದಿನವೂ ಅಲ್ಲಿದ್ದರು. ಮಧ್ಯಾಹ್ನದ ಸಮಯ ವೇದಿಕೆ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಮರದ ನೆರಳಿನಲ್ಲಿ ಮರಳಿನ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ನಾವು ಆಶ್ಚರ್ಯದಿಂದ ನೋಡುತ್ತಿದ್ದರೆ ರಾಜೇಶ್ವರಿಯವರು `ಅವರು ಹೊರಗಡೆ ಹೋದಾಗ ಯಾವ ಸೌಲಭ್ಯವನ್ನೂ ನಿರೀಕ್ಷಿಸುವುದಿಲ್ಲ, ಹೇಗಿದ್ದರೆ ಹಾಗೆ ಹೊಂದಿಕೊಳ್ಳುತ್ತಾರೆ' ಎಂದರು. ನಮ್ಮ ಕಾಲೇಜಿಗೂ ಬಂದು ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟರು.

ಚಿಕ್ಕಮಗಳೂರಿಗೆ ಹೋದಾಗ ಎರಡು ಸಲ ನಾವು ತೇಜಸ್ವಿಯವರ ಮನೆಗೆ ಹೋಗಿದ್ದೆವು. ಅವರ ಸರಳತೆಗೆ ಅವರ ಮನೆಯೂ ನಿದರ್ಶನವಾಗಿತ್ತು. ಸರಳವಾದ ಬೆತ್ತದ ಕುರ್ಚಿಗಳೇ ಪೀಠೋಪಕರಣ. ಅವುಗಳ ಮೇಲೆ ಮೆತ್ತೆಯನ್ನು ಹಾಕಿರಲಿಲ್ಲ. 'ಹಾಗಿದ್ದರೇ ಸರಿ' ಎಂಬುದು ತೇಜಸ್ವಿಯವರ ಅಭಿಪ್ರಾಯ. ಮನೆಯಲ್ಲಿ ಎಲ್ಲೂ 'ಥಳ ಫಳ' ಇರಲಿಲ್ಲ. ಮನೆಯ ಸುತ್ತ ಹಲವು ಜಾತಿಯ ಹಣ್ಣಿನ ಗಿಡಗಳು- ಅವುಗಳಲ್ಲಿ ಬಿಟ್ಟ ಹಣ್ಣುಗಳೆಲ್ಲ ಹಕ್ಕಿಗಳಿಗೇ ಮೀಸಲು. ಟೆರೇಸ್ ಮೇಲೂ ಹಕ್ಕಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ. ಮನೆಯ ಹಿಂಭಾಗದಲ್ಲಿದ್ದ ಕೆರೆಯಲ್ಲಿ ತುಂಬ ನೀರು. ಮೂಡಿಗೆರೆಯ ಮಾಂಸದಂಗಡಿಯಲ್ಲಿ ಸಿಕ್ಕ ಎರಡು ಬಾತುಕೋಳಿ ಮರಿಗಳನ್ನು ತಂದು ಆ ಕೆರೆಯಲ್ಲಿ ಸಾಕಿ ಅವು ಸುಂದರವಾಗಿ ಬೆಳೆದ ಫೋಟೋಗಳನ್ನು ನನಗೆ 'ಈಮೇಲ್'ನಲ್ಲಿ ಕಳಿಸಿದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆ ಬಾತುಗಳನ್ನು ಯಾರೋ ಕದ್ದೊಯ್ದರು ಎಂದು ರಾಜೇಶ್ವರಿಯವರು ಹೇಳಿದರು. ಎಷ್ಟೋ ಹಕ್ಕಿ ಚಿತ್ರಗಳನ್ನು ಅವುಗಳಿಗೆ ಸಂಬಂಧಿಸಿದ ಕತೆಗಳನ್ನೂ ಅವರು ಈ ಮೇಲ್ ನಲ್ಲಿ ಕಳುಹಿಸಿದ್ದರು. ಒಮ್ಮೆ ತೀರ್ಥಹಳ್ಳಿಗೆ ಬಂದಾಗ ಅವರು ತೆಗೆದ 70 ಹಕ್ಕಿಯ ಚಿತ್ರಗಳನ್ನು ಸಿಡಿಯಲ್ಲಿ ಹಾಕಿಕೊಂಡು ಬಂದು ನಮ್ಮ ಕಂಪ್ಯೂಟರ್ ಗೆ ಹಾಕಿಕೊಟ್ಟರು (10 ವರ್ಷಗಳ ಹಿಂದೆ).

ನನ್ನ ಪತಿ ಶ್ರೀಕಂಠಮೂರ್ತಿಯವರು ಪರಿಸರದ ಕಥೆಗಳನ್ನು ಇಂಗ್ಲಿಷ್ ಗೆ ಅನುವಾದಿಸಿ ಪ್ರಕಟಿಸಲು ಅನುಮತಿ ಕೇಳಿದಾಗ `ಅದಕ್ಕೇನ್ರಿ ಯಾವ ಕಥೆ ಬೇಕಾದರೂ ಅನುವಾದಿಸಿ' ಎಂದು ಅನುಮತಿ ಪತ್ರ ಬರೆದು ಕಳಿಸಿದರು. ತೇಜಸ್ವಿಯವರೊಡನೆ ಲೇಖಕರು

ತೇಜಸ್ವಿಯವರ ಮನೆಯ ಪರಿಸರವೇ ಅವರ ಅಭಿರುಚಿಯನ್ನು ತಿಳಿಸುವಂತಿದೆ. ಹಿಂಭಾಗದ ಕೆರೆ, ಅಡಿಕೆ ತೋಟ, ಪಕ್ಕದಲ್ಲಿ ಕಾಫಿ ತೋಟ, ಪಕ್ಕದ ಕಣಿವೆಯಲ್ಲಿ ಹರಿಯುತ್ತಾ ಮನೆಗೆ ನೀರೊದಗಿಸುವ ಪುಟ್ಟ ಝರಿ, (ಒಂದು ಝರಿಯ ಸುತ್ತ ಕಥೆಗೆ ಸ್ಫೂರ್ತಿ) ಮರವೆಲ್ಲಾ ಮುಚ್ಚಿಹೋಗುವಂತೆ ಕಾಡು ಮರವೊಂದಕ್ಕೆ ಹಬ್ಬಿ ನೀಲಿ ಹೂ ತಳೆದ ಥನ್ ಬರ್ಜಿಯಾ ಬಳ್ಳಿ, 'ನಿರುತ್ತರಾ' ಹೆಸರಿನ ಗೇಟ್, ಪಕ್ಕದಲ್ಲಿ ಕತ್ತರಿಸದೇ ಬಿಟ್ಟ ಬೇಲಿಯ ಪೊದೆಗಳು, ಪ್ರತಿಯೊಂದೂ ತೇಜಸ್ವಿಯವರು 'ವಿಶಿಷ್ಟ' ಎಂದು ತಿಳಿಸುತ್ತಿವೆ.

ಒಮ್ಮೆ ಮೈಸೂರಿನಲ್ಲಿ ಅಕ್ಯಾಡೆಮಿ ಸ್ಟ್ಯಾಫ್ ಕಾಲೇಜಿನಲ್ಲಿ ನಡೆಯುತ್ತಿದ್ದ ರಿಫ್ರೆಷರ್ ಕೋರ್ಸಿನ ಕ್ಲಾಸ್ ಮುಗಿಸಿಕೊಂಡು ಜಯಲಕ್ಷ್ಮೀಪುರಂನ ನಮ್ಮ ಮನೆಗೆ ಸಂಜೆ ನಡೆದು ಬರುತ್ತಿದ್ದೆ. ತೇಜಸ್ವಿ ತಮ್ಮ ಹೊಸ ಬಿಳಿ ಝೆನ್ ಕಾರ್ ನಲ್ಲಿ ಎದುರಿನಿಂದ ಬಂದರು. ಅವರು ಶ್ರೀರಾಂ ಮನೆಗೆ ಹೋಗುತ್ತಿದ್ದರು. ರಂಗಾಯಣದಲ್ಲಿ ತಮ್ಮ ಚಿತ್ರ ಪ್ರದರ್ಶನ ಇರುವುದಾಗಿ ತಿಳಿಸಿ, ಈಗ ಶ್ರೀರಾಂ ಮನೇಲಿ ಆ ಚಿತ್ರಗಳಿವೆ ಬಂದು ನೋಡು ಎಂದರು. ಅವರ ಜೊತೆಗೆ ಹೋಗಿ ಶ್ರೀರಾಂ ಮನೇಲಿ ಪುಸ್ತಕದ ಕಟ್ಟುಗಳ ನಡುವೆ ಇದ್ದ ತೇಜಸ್ವಿಯವರ ಚಿತ್ರಗಳನ್ನು ನೋಡಿ 'ಕಂಪ್ಯೂಟರ್ ಗ್ರಾಫಿಕ್' ಬಗ್ಗೆ ಅವರ ಮಾತುಗಳನ್ನು ಕೇಳಿಸಿಕೊಂಡು ಬಂದೆ. ಯಾವಾಗಲಾದರೂ ಅವರ ಮನೆಗೆ ಫೋನ್ ಮಾಡಿದರೆ, ಗಟ್ಟಿ ದನಿಯಲ್ಲಿ ಮಾತಾಡುತ್ತಾ ಮುಕ್ತವಾಗಿ ನಗುವುದು ಅವರ ಅಭ್ಯಾಸ. ತಮ್ಮ ಗಮನ ಸೆಳೆದ ನಿಸರ್ಗವ್ಯಾಪಾರಗಳ ಕುರಿತು You see, it is very mysterious ಎಂದು ಹೇಳುತ್ತಿದ್ದರು. 'ನಾನೂ ಅನ್ನಾ ತಿನ್ನಾ ಮನುಷ್ಯ' ಎಂದು ತಮ್ಮನ್ನು ಸಾಮಾನ್ಯ ಎಂದು ಸ್ಪಷ್ಟಪಡಿಸಲು ಹೇಳುತ್ತಿದ್ದುದು ಅವರದೇ ಶೈಲಿಯಲ್ಲಿ. ಮುಗ್ಧಮಗುವಿನಂತೆ ಕುತೂಹಲದ ಪ್ರವೃತ್ತಿ ಅವರ ಪ್ರತಿಯೊಂದು ನಡವಳಿಕೆಯಲ್ಲೂ ಕಾಣುತ್ತಿತ್ತು. ಮುಖಸ್ತುತಿ ಮಾಡುವವರನ್ನು ಕಂಡರೆ ಅವರಿಗೆ ಬೇಸರ. 'ನಾನು ಕನ್ನಡಕ್ಕೆ ಅನುವಾದಿಸಿದ ಅಮೃತಾ ಪ್ರೀತಂ ಅವರ 'ಪಿಂಜರ್' ಪುಸ್ತಕ ತಲುಪಿದ ಕೂಡಲೆ ಒಂದೇ ಸಲ ಓದಿ ಮುಗಿಸಿದೆ ನೋಡು, ಚೆನ್ನಾಗಿದೆ' ಎಂದು ಹೇಳುತ್ತಾ, ದೇಶ ವಿಭಜನೆಯ ಕಾಲದ ಹಿಂಸೆಯ ಕುರಿತು ಬಂದ ಪುಸ್ತಕಗಳ ಕುರಿತು ಮಾತನಾಡಿದರು.

ತೇಜಸ್ವಿ ಎಲ್ಲೂ ಒಬ್ಬರೇ ಹೋಗುತ್ತಿರಲಿಲ್ಲ. ಜೊತೆಗೆ ರಾಜೇಶ್ವರಿ ಇದ್ದೇ ಇರುತ್ತಿದ್ದರು. ಈಗ ಅವರ ಮನೆಯಲ್ಲೂ, ಸಾಹಿತ್ಯ ಲೋಕದಲ್ಲೂ, ಸಮಾಜದಲ್ಲೂ ತೇಜಸ್ವಿಯವರ ಅನುಪಸ್ಥಿತಿ ಎದ್ದುಕಾಣುವಂತಿದೆ.

2 ಕಾಮೆಂಟ್‌ಗಳು:

  1. Your article took me down the memory lane . Feel like crying every time I get to read something about him . Like you all , missing him terribly . Hard to believe it's three years since he disappeared from this planet to a mysterious destination !

    ಪ್ರತ್ಯುತ್ತರಅಳಿಸಿ
  2. ಹೌದು ಮದನ್ ತೇಜಸ್ವಿ ತೇಜಸ್ವಿ ಅಲ್ಲೆಲ್ಲೋ ನಿಗೂಢಮನುಷ್ಯರಾಗಿ ಇಲ್ಲಿನ ವಿದ್ಯಮಾನಗಳನ್ನು ವೀಕ್ಷಿಸುತ್ತಿದ್ದಾರೆ. ನನ್ನ ಬ್ಲಾಗ್ ನ ಓದುಗರಾಗಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ